ಮೆರೋಯೀ
ಒಂದು ಪ್ರಾಚೀನ ನಗರ. ಕ್ರಿ.ಪೂ.700ರಿಂದ 300ರ ತನಕ ನಪಾಟಾದ ಇಥಿಯೋಪಿಯನ್ ರಾಜರ ಆಳ್ವಿಕೆಯ ಕಾಲದಲ್ಲಿ ಇದು ದಕ್ಷಿಣದ ರಾಜಧಾನಿಯಾಗಿತ್ತು. ಸೂಡಾನಿನ ನೈಲ್‍ನದಿಯ ಪೂರ್ವ ತೀರದಲ್ಲಿ ವ್ಯಾಪಕವಾಗಿ ಇದರ ಅವಶೇಷಗಳು ಉಳಿದಿವೆ. ಬ್ಲೂನೈಲ್ ಪ್ರದೇಶದ ರೊಸೈರಿಸ್‍ನವರೆಗೆ ವ್ಯಾಪಕ ಪ್ರದೇಶದಲ್ಲಿ ಮೆರೋಯೀಟಿಕ್ ನಿವೇಶನಗಳು ವಿಸ್ತರಿಸಿವೆ. ಖರ್ತೋಮಿನಿಂದ ಸುಮಾರು 350ಕಿಮೀ ದಕ್ಷಿಣದಲ್ಲಿ ಮೆರೋಯೀಟಿಕ್ ಅವಶೇಷಗಳು ಇತ್ತೀಚೆಗೆ ಪತ್ತೆಯಾಗಿವೆ. 

	1844ರಲ್ಲಿ ಲೆಪ್ಸಿಯಸ್ ಎಂಬಾತ ಮೆರೋಯೀನಗರವನ್ನು ಪರಶೋಧಿಸಿ ಸಮೀಕ್ಷಿಸಿದಾಗ ರಾಜಗೃಹಗಳಿಂದ ಕೂಡಿದ ಪ್ರಾಕಾರ ಹಾಗೂ ಅರಮನೆಗಳಲ್ಲಿಯೆ ಸ್ನಾನಗೃಹಗಳು ಪತ್ತೆಯಾದವು. ಆಸ್ಪಲೂತನ ಕಾಲಕ್ಕೆ, ಅಂದರೆ ಕ್ರಿ.ಪೂ. 590ರ ಸುಮಾರಿಗೆ, ಸೇರುವ ಇತರ ಕಟ್ಟಡಗಳೂ ಇಲ್ಲಿ ಕಂಡು ಬಂದಿವೆ. ಇಲ್ಲಿ ಲಭ್ಯವಾದ ಅಗಸ್ಟಸ್ ಶಿರಶಿಲ್ಪವೊಂದು ಈಗ ಬ್ರಿಟಿಷ್ ಮ್ಯೂಸಿಯಂನಲ್ಲಿ ಸುರಕ್ಷಿತವಾಗಿದೆ. ಪ್ರಾಕಾರದ ಹೊರಗಿರುವ ಹಲವು ದೇವಾಲಯಗಳಲ್ಲಿ ಐಸಿಸ್, ಸಿಂಹ ದೇವತೆ ಆಪಿರೆಮಕ್ ಮತ್ತು ಸೂರ್ಯ ದೇಗುಲಗಳು ಮುಖ್ಯವಾದವು. ಇಲ್ಲಿಗೆ 3 ಕಿಮೀ. ದೂರದಲ್ಲಿ ದಕ್ಷಿಣಕ್ಕೆ ರಾಣಿ ಕ್ಯಾಂಡೇಸ್ ಮತ್ತು ಆಕಿನಿರಾಸರ ಶಾಸನ ಶಿಲ್ಪ ಸ್ತಂಭಗಳಿಂದ ಕೂಡಿದ ಗುಡಿಯೊಂದಿದೆ. ಒಂದು ಶಾಸನದಲ್ಲಿ ಆಗಸ್ಟಸ್‍ನ ಉಲ್ಲೇಖವಿದೆ. 

	1921--23ರಲ್ಲಿ ಜಿರೈಸ್ನರ್ ಎಂಬಾತ ಕೆಲವು ಸಮಾಧಿ ಹಾಗೂ ಪಿರಾಮಿಡ್ಡುಗಳಲ್ಲಿ ಉತ್ಖನನ ಕಾರ್ಯ ನಡೆಸಿದ. ಇಲ್ಲಿಯ ಪಿರಮಿಡ್ಡುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿದೆ. ದಕ್ಷಿಣದಲ್ಲಿರುವ ಪಿರಮಿಡ್ಡುಗಳ ಗುಂಪು ಕ್ರಿ.ಪೂ. 8ರಿಂದ 3ನೆಯ ಶತಮಾನಗಳ ಕಾಲಾವಧಿಗೆ ಸೇರುತ್ತದೆ; ಇಲ್ಲಿ ಮೂವರು ಅರಸರನ್ನು ಸಮಾಧಿ ಮಾಡಲಾಗಿತ್ತೆಂದು ತಿಳಿದುಬರುತ್ತದೆ. ಉತ್ತರದಲ್ಲಿರುವ ಪಿರಮಿಡ್ಡುಗಳ ಗುಂಪು ಕ್ರಿ.ಪೂ.3ನೆಯ ಶತಮಾನದ ಅನಂತರದ ಕಾಲದ್ದು. ಇಲ್ಲಿ ಮೂವತ್ತು ರಾಜರಾಣಿಯರ ಸಮಾಧಿಗಳಿಂದ ಕೂಡಿದ ಒಂದು ಪಿರಮಿಡ್ ಇತ್ತು ಎನ್ನಲಾಗಿದೆ. ಮೆರೋಯೀ ನಗರದ 1.5ಕಿಮೀ ಪಶ್ಚಿಮಕ್ಕೆ ಗಣ್ಯರ ದೊಡ್ಡ ಹೂಳುಗಾಡೊಂದು ಗೋಚರಿಸಿದೆ. 

	ಕ್ರಿ.ಪೂ.400ರಿಂದ ಖರ್ತೋಮಿನ ಉತ್ತರದಲ್ಲಿ ಅದುರು ಕರಗಿಸಿ ಕಬ್ಬಿಣವನ್ನು ಪಡೆಯಲಾಗುತ್ತಿತ್ತು. ನೈಲ್ ನದಿಯ ದ್ವೀಪವೊಂದರಲ್ಲಿ ಹಾಗೂ ಲೇಕ್‍ಚಾಡ್ ಪ್ರದೇಶದಲ್ಲಿ ಅದುರು ತೆಗೆಯುತ್ತಿದ್ದ ಗಣಿಗಳು ಕಂಡುಬಂದಿವೆ. 

	ಇಲ್ಲಿ ಲಭ್ಯವಾದ ಮುಖ್ಯ ಶಾಸನಗಳು ಈಜಿಪ್ಪಿನಹೈರೋಗ್ಲೀಪೆಕ್ಸ್ (ಚಿತ್ರಲಿಪಿ) ಹಾಗೂ ಮೆರೋಯೀಟಿಕ್ ಲಿಪಿಗಳಲ್ಲಿವೆ. ಕೆಲವು ಗ್ರೀಕ್ ಲಿಪಿಯ ಶಾಸನ ತುಣುಕುಗಳೂ ದೊರೆತಿವೆ.					
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ